ಎಲ್ಲೋ ಇತ್ತೀಚೆಗೆ ಓದಿದ್ದು:
ಪ್ರತಿಯೊಂದು ದೇಶಕ್ಕೆ ತನ್ನತನ ಇರುವಂತೆ ಪ್ರತಿಯೊಂದು ಊರಿಗೂ ತನ್ನದೇ ಆದ ತನ್ನತನ ಇರುತ್ತದೆಯಂತೆ.
ಹಾಗಾದರೆ ನಮ್ಮ ಬೆಂಗಳೂರಿನ "ಬೆಂಗಳೂರುತನ" ಏನು?
ಬೆಂಗಳೂರಿನ ಕೆಲವಾರು ಪಾನಪ್ರಿಯರು ನಮ್ಮೂರನ್ನ "ಪಬ್ ಸಿಟಿ" ಅಂದಿದ್ದಾರೆ. ಇನ್ನೂ ಕೆಲವರು ಇಲ್ಲಿ ಅಲ್ಲಲ್ಲಿ--ಅಲ್ಲಲ್ಲ, ಎಲ್ಲೆಲ್ಲೂ ತಲೆಯೆತ್ತಿರುವ ಐ.ಟಿ ಸಂಸ್ಥೆಗಳಿಂದಾಗಿ ಇದನ್ನ "ಭಾರತದ ಸಿಲಿಕಾನ್ ಸಿಟಿ" ಅಂದಿದ್ದಾರೆ. ಇನ್ನೂ ಕೆಲವರು ಹಗಲಿರುಳೆನ್ನದೇ ಇಲ್ಲಿ ಅವಿರತವಾಗಿ ಬೊಗಳುವ ನಾಯಿಗಳನ್ನು ನೋಡಿ(ಕೇಳಿ) "ಇಲ್ಲಿ ನಾಯಿಗಳಿವೆ, ಎಚ್ಚರಿಕೆ" ಎಂದಿದ್ದಾರೆ. ಬೆಂಗಳೂರಿನ ತುಂಬೆಲ್ಲಾ ನಾಯಿಕೊಡೆಗಳಂತೆ ತಲೆಯೆತ್ತಿರುವ "ಮಾಲ್"ಗಳಿಂದಾಗಿ ಇದನ್ನ "ಮಾಲ್ ಸಿಟಿ" ಅಂತಲೂ ಕರೆದಿದ್ದಾರೆ.
ಇದೇ ಏನು ಬೆಂಗಳೂರು? ಇಲ್ಲ ಬಿಡಿ.. "ಅಂದದೂರು ಬೆಂಗಳೂರು, ಆನಂದದ ತವರೂರು" ನಮ್ಮ ಬೆಂಗಳೂರು. ಬೆಂಗಳೂರುತನವೆಂದರೆ ಮುಖದ ಮೇಲೆ ಉಲ್ಲಾಸ, ಏನಾದ್ರೂ "ಪರ್ವಾಗಿಲ್ಲ ಬಿಡಿ" ಅನ್ನುವ ಉದಾರತೆ, ಯಾರಿಗಾದರೂ ನೆರವಾಗುವ ದೊಡ್ಡಮನಸ್ಸು.
ಇದನ್ನೆಲ್ಲಾ ಬೆಂಗಳೂರು ಕಳೆದುಕೊಂಡುಬಿಟ್ಟಿದೆಯೇನೋ ಎಂದು ನನಗನ್ನಿಸುತ್ತಿದ್ದಾಗ ಕೆಲವು ದಿನಗಳ ಹಿಂದೆ ನಡೆದ ಈ ಸನ್ನಿವೇಶ ಮನಸ್ಸಿಗೆ ತುಂಬಾ ಸಂತೋಷ ತಂದಿತು. ನಾನು ಒಂದು ಸಮಾರಂಭಕ್ಕೆ ಆಟೋದಲ್ಲಿ ಹೋಗಿದ್ದೆ. ಆಟೋದಿಂದ ಇಳಿದಾಗ ಅದರ ಬಾಡಿಗೆ ಕೊಡಲು ನನ್ನ ಬಳಿ ಚಿಲ್ಲರೆ ಇರಲಿಲ್ಲ. ಆಗಿನ್ನೂ ಬೆಳೆಗ್ಗೆಯ ಸಮಯವಾಗಿದ್ದಕಾರಣ ಎಲ್ಲಿಯೂ ಯಾರ ಬಳಿಯೂ ಚಿಲ್ಲರೆ ಸಿಗಲಿಲ್ಲ. ಆಟೋದವರಿಗೆ ೨೦ ರೂಪಾಯಿ ಕೊಡುವುದಿತ್ತ. ಏನು ಮಾಡುವುದೆಂದು ತಲೆಕಡಿಸಿಕೊಂಡಿದ್ದಾಗ ಅಲ್ಲಿಯೇ ಇದ್ದ ಅಂಗಡಿಯವರೊಬರು ನನ್ನ ಕರೆದು "ತೊಗೊಮ್ಮಾ, ೨೦ ರೂ, ಆಟೋದವರಿಗೆ ಕೊಡು, ಆಮೇಲೆ ನನಗೆ ಕೊಡುವಿಯಂತೆ" ಅಂದ್ರು. ಅವರಿಗೆ ನಾನು ಯಾರು, ಏನು, ಎತ್ತ ಗೊತ್ತಿಲ್ಲ, ನನ್ನ ಅವರು ಮತ್ತೊಮ್ಮೆ ನೋಡುವರೋ ಇಲ್ಲವೋ ಗೊತ್ತಿಲ್ಲ. ಹೀಗಿದ್ದೂ ಆ ಸಮಯದಲ್ಲಿ ನನಗೆ ದುಡ್ಡು ಕೊಟ್ಟರು. ಅದು ಕೇವಲ ೨೦ ರೂಪಾಯಿ ಇರಬಹುದು, ಆದ್ರೆ ಈ ರೀತಿ ಬೇರೆ ಯಾವ ದೊಡ್ಡ ಊರಿನಲ್ಲೂ ಕಾಣಸಿಗುವುದಿಲ್ಲವೇನೋ... ಇದೇ ನಮ್ಮೂರಿನ ನಮ್ಮತನ-ತನ್ನತನ