ಸೋಮವಾರ, ಆಗಸ್ಟ್ 23, 2010

ಬೆಂಗಳೂರುತನ

ಎಲ್ಲೋ ಇತ್ತೀಚೆಗೆ ಓದಿದ್ದು:
ಪ್ರತಿಯೊಂದು ದೇಶಕ್ಕೆ ತನ್ನತನ ಇರುವಂತೆ ಪ್ರತಿಯೊಂದು ಊರಿಗೂ ತನ್ನದೇ ಆದ ತನ್ನತನ ಇರುತ್ತದೆಯಂತೆ.

ಹಾಗಾದರೆ ನಮ್ಮ ಬೆಂಗಳೂರಿನ "ಬೆಂಗಳೂರುತನ" ಏನು?
ಬೆಂಗಳೂರಿನ ಕೆಲವಾರು ಪಾನಪ್ರಿಯರು ನಮ್ಮೂರನ್ನ "ಪಬ್ ಸಿಟಿ" ಅಂದಿದ್ದಾರೆ. ಇನ್ನೂ ಕೆಲವರು ಇಲ್ಲಿ ಅಲ್ಲಲ್ಲಿ--ಅಲ್ಲಲ್ಲ, ಎಲ್ಲೆಲ್ಲೂ ತಲೆಯೆತ್ತಿರುವ ಐ.ಟಿ ಸಂಸ್ಥೆಗಳಿಂದಾಗಿ ಇದನ್ನ "ಭಾರತದ ಸಿಲಿಕಾನ್ ಸಿಟಿ" ಅಂದಿದ್ದಾರೆ. ಇನ್ನೂ ಕೆಲವರು ಹಗಲಿರುಳೆನ್ನದೇ ಇಲ್ಲಿ ಅವಿರತವಾಗಿ ಬೊಗಳುವ ನಾಯಿಗಳನ್ನು ನೋಡಿ(ಕೇಳಿ) "ಇಲ್ಲಿ ನಾಯಿಗಳಿವೆ, ಎಚ್ಚರಿಕೆ" ಎಂದಿದ್ದಾರೆ. ಬೆಂಗಳೂರಿನ ತುಂಬೆಲ್ಲಾ ನಾಯಿಕೊಡೆಗಳಂತೆ ತಲೆಯೆತ್ತಿರುವ "ಮಾಲ್"ಗಳಿಂದಾಗಿ ಇದನ್ನ "ಮಾಲ್ ಸಿಟಿ" ಅಂತಲೂ ಕರೆದಿದ್ದಾರೆ.
ಇದೇ ಏನು ಬೆಂಗಳೂರು? ಇಲ್ಲ ಬಿಡಿ.. "ಅಂದದೂರು ಬೆಂಗಳೂರು, ಆನಂದದ ತವರೂರು" ನಮ್ಮ ಬೆಂಗಳೂರು. ಬೆಂಗಳೂರುತನವೆಂದರೆ ಮುಖದ ಮೇಲೆ ಉಲ್ಲಾಸ, ಏನಾದ್ರೂ "ಪರ್ವಾಗಿಲ್ಲ ಬಿಡಿ" ಅನ್ನುವ ಉದಾರತೆ, ಯಾರಿಗಾದರೂ ನೆರವಾಗುವ ದೊಡ್ಡಮನಸ್ಸು.
ಇದನ್ನೆಲ್ಲಾ ಬೆಂಗಳೂರು ಕಳೆದುಕೊಂಡುಬಿಟ್ಟಿದೆಯೇನೋ ಎಂದು ನನಗನ್ನಿಸುತ್ತಿದ್ದಾಗ ಕೆಲವು ದಿನಗಳ ಹಿಂದೆ ನಡೆದ ಈ ಸನ್ನಿವೇಶ ಮನಸ್ಸಿಗೆ ತುಂಬಾ ಸಂತೋಷ ತಂದಿತು. ನಾನು ಒಂದು ಸಮಾರಂಭಕ್ಕೆ ಆಟೋದಲ್ಲಿ ಹೋಗಿದ್ದೆ. ಆಟೋದಿಂದ ಇಳಿದಾಗ ಅದರ ಬಾಡಿಗೆ ಕೊಡಲು ನನ್ನ ಬಳಿ ಚಿಲ್ಲರೆ ಇರಲಿಲ್ಲ. ಆಗಿನ್ನೂ ಬೆಳೆಗ್ಗೆಯ ಸಮಯವಾಗಿದ್ದಕಾರಣ ಎಲ್ಲಿಯೂ ಯಾರ ಬಳಿಯೂ ಚಿಲ್ಲರೆ ಸಿಗಲಿಲ್ಲ. ಆಟೋದವರಿಗೆ ೨೦ ರೂಪಾಯಿ ಕೊಡುವುದಿತ್ತ. ಏನು ಮಾಡುವುದೆಂದು ತಲೆಕಡಿಸಿಕೊಂಡಿದ್ದಾಗ ಅಲ್ಲಿಯೇ ಇದ್ದ ಅಂಗಡಿಯವರೊಬರು ನನ್ನ ಕರೆದು "ತೊಗೊಮ್ಮಾ, ೨೦ ರೂ, ಆಟೋದವರಿಗೆ ಕೊಡು, ಆಮೇಲೆ ನನಗೆ ಕೊಡುವಿಯಂತೆ" ಅಂದ್ರು. ಅವರಿಗೆ ನಾನು ಯಾರು, ಏನು, ಎತ್ತ ಗೊತ್ತಿಲ್ಲ, ನನ್ನ ಅವರು ಮತ್ತೊಮ್ಮೆ ನೋಡುವರೋ ಇಲ್ಲವೋ ಗೊತ್ತಿಲ್ಲ. ಹೀಗಿದ್ದೂ ಆ ಸಮಯದಲ್ಲಿ ನನಗೆ ದುಡ್ಡು ಕೊಟ್ಟರು. ಅದು ಕೇವಲ ೨೦ ರೂಪಾಯಿ ಇರಬಹುದು, ಆದ್ರೆ ಈ ರೀತಿ ಬೇರೆ ಯಾವ ದೊಡ್ಡ ಊರಿನಲ್ಲೂ ಕಾಣಸಿಗುವುದಿಲ್ಲವೇನೋ... ಇದೇ ನಮ್ಮೂರಿನ ನಮ್ಮತನ-ತನ್ನತನ

ಭಾನುವಾರ, ಜೂನ್ 27, 2010

ನಮ್ಮನೆ ಚಿನ್ನು

ಅಮ್ಮ ಹೇಳ್ತಾಇದ್ರು "ಚಿನ್ನು ಎಷ್ಟು ಮುದ್ದಾಗಿದಾಳೆ, ಇವಳ ಜೊತೆ ಹೊತ್ತು ಹೋಗೋದೇ ತಿಳಿಯೊಲ್ಲ". ಹೌದು, ನಮ್ಮ ಚಿನ್ನು ತುಂಬಾ ಮುದ್ದಾಗಿದಾಳೆ. ಎಲ್ಲರಿಗೂ ಅವಳೆಂದ್ರೆ ಮುದ್ದೋ ಮುದ್ದು. ಅವಳಿಗೆ ನಮ್ಮನ್ನೆಲ್ಲಾ ಪ್ರೀತಿಸೋದು ಬಿಟ್ಟು ಬೇರೇನೂ ಗೊತ್ತಿಲ್ಲ. ಎಂತಹಾ ಮುಗ್ಧ ಮನಸ್ಸು ಅವಳದ್ದು.

ಅಮ್ಮ ಮನೇಗ್ ಬರೋದನ್ನೇ ಚಿನ್ನು ಕಾಯ್ತಾ ಇರ್ತಾಳೆ. ಬಂದ್ ಕೂಡ್ಲೇ ಅವರಹತ್ರ ಸೇರ್ಕೊಂಡ್ ಬಿಡ್ತಾಳೆ. ಅವರಿಗೆ ಒಂದು ನಿಮಿಷ ಪುರುಸೊತ್ತು ಕೊಡ್ಡೊಲ್ಲ. ಅವಳ ಕಣ್ ಮುಂದೆಯಿಂದ ಅವರು ಅಲುಗಾಡುವಂತಿಲ್ಲ. ಅವಳನ್ನೇನಾದ್ರೂ ಬಿಟ್ಟು ಆಚೀಚೆ ಹೋದ್ರೆ, ಶುರು ಅವಳ ಪ್ರಲಾಪ.

ಒಂದು ದಿನ ಅಮ್ಮ ಯೋಚ್ನೆ ಮಾಡ್ತಾ ಇದ್ರು "ನಮ್ಮ ಚಿನ್ನಿ ಎಲ್ಲಾ ಸರಿ, ಅವಳಿಗೆ ಮಾತು ಆಡೋಕೆ ಬಂದಿದ್ರೆ!! ಅಹಾ ಎಷ್ಟು ಚೆನ್ನಾಗಿರ್ತಿತ್ತು". ನನಗಾಗ ಅನ್ನಿಸಿದ್ದು "ಅವ್ಳು ಮಾತಾಡೋ ಹಾಗಿದ್ದಿದ್ರೆ ಚೆಂದ ಇರ್ತಿತ್ತು. ಆದ್ರೆ, ಮಾತು ಆಡೋಕೆ ಬಂದಿದ್ರೆ ಅವ್ಳೂ ಕೂಡ ನಮ್ಮೆಲ್ಲರಂತೆ ಅಮ್ಮನಿಗೆ ಎದುರುತ್ತರ ಕೊಡ್ತಿದ್ಲೇನೋ? ಅಮ್ಮನ ಮಾತಿಗೆ ಮಾತು ಬೆಳೆಸಿ ಜಗ್ಳಾ ಆಡ್ತಿದ್ಲೇನೋ, ಒಂದು ರೀತಿಲಿ ಅವ್ಳಿಗೆ ಮಾತು ಬರ್ದೇಇರೋದೇ ಒಳ್ಳೇದು". ಚಿನ್ನೀ ಹೀಗಿದ್ರೇ ಚೆನ್ನ, ಚಿನ್ನಿ ನಮ್ಮ ಮನೆಯ ಮುದ್ದಿನ ನಾಯಿ.

ಭಾನುವಾರ, ಮಾರ್ಚ್ 21, 2010

ಕುವೆಂಪು ಅವರಿಂದ ಕಲಿಯಬೇಕಾದ " glocalisation" ಪಾಠ

ಕುವೆಂಪು ಅವರಿಗೂ "glocalisation"ಗೂ ಎತ್ತಣಿಂದೆತ್ತಣ ನಂಟು ಅಂತಾನಾ? ಇದೆ ಇದೆ.. ರಾಬರ್ಟ್ ಬ್ರೌನಿಂಗ್ ಬರೆದಿದ್ದ "pied piper of Hamelin" ಕವನವನ್ನ ಕುವೆಂಪು ಅವರು ಕನ್ನಡದಲ್ಲಿ ತಂದರು. ತಂದರು ಅಂದ್ರೆ ಹೇಗಿದ್ಯೋ ಹಾಗೆ ಅದನ್ನ ಕನ್ನಡಕ್ಕೆ ಅನುವಾದ ಮಾಡಲಿಲ್ಲ. ಅದನ್ನ ಪೂರ್ತಿ ಕನ್ನಡೀಕರಿಸಿದ್ರು.ಕುವೆಂಪು ಅವರ ಕೈಯಲ್ಲಿ "pied piper of Hamelin" "ಬೊಮ್ಮನಹಳ್ಳಿಯ ಕಿಂದರಿ ಜೋಗಿ" ಆಗಿದ್ದ. ಸ್ವಲ್ಪ ಯೋಚಿಸಿ. ಅವರು ಹೀಗೆ ಮಾಡದೆ, ಸುಮ್ನೆ "ಬಣ್ಣ-ಬಣ್ಣದ ಬಟ್ಟೆ ತೊಟ್ಟ ಹಾಮ್ಲಿನ್ನ ಪೀಪಿ ಊದೋನು" ಅಂತ ಬರೆದಿದ್ರೆ ಅದ್ ಯಾವ್ ಕನ್ನಡದ ಮಕ್ಳು ಇದನ್ನ ಹಾಡಿ ಕುಣೀತಿದ್ರು? ಇದರಿಂದ ಏನ್ ತಿಳಿಯುತ್ತೆ? ಯಾವ ಯಾವ ಜಾಗದ ಜನರಿಗೆ ಯಾವ್-ಯಾವುದು ಮನಸ್ಸಿಗೆ, ಜೀವನಕ್ಕೆ ಹತ್ತಿರ ಆಗಿರತ್ತೋ, ಅವರನ್ನ ಅದ್ರ ಮೂಲಕಾನೇ ತಲುಪಲು ಸಾಧ್ಯ.

ಇದು ನಮ್ಮ ಕರ್ನಾಟಕದಲ್ಲಿ ಬಂದು ರಸ್ತೆ, ಟೀವಿ, ನ್ಯೂಸ್-ಪೇಪರ್, ಪಾಂಪ್ಲೆಟ್ ಎಲ್ಲಾದ್ರಲ್ಲು ಜಾಹೀರಾತುಗಳನ್ನ ಹಾಕ್ತಾರಲ್ಲ ಅವ್ರುಗಳು ಖಂಡಿತ ಅರ್ಥಾ ಮಾಡ್ಕೋ ಬೇಕು. "Glocalisation" ಇವತ್ತಿನ ವ್ಯಾಪಾರ, ಮುಕ್ತ ಮಾರುಕಟ್ಟೆಯಲ್ಲಿ ಬಹಳ ಮುಖ್ಯವಾದ ಅಂಶ. ಒಂದು ಪದಾರ್ಥ ಯಾವುದೇ ಒಂದು ಪ್ರದೇಶದಲ್ಲಿ ಎಷ್ಟರಮಟ್ಟಿಗೆ ಮಾರುಕಟ್ಟೆಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ ಅನ್ನೋದು, ಆ ಪದಾರ್ಥ ಅಲ್ಲಿನ ಜನರಿಗೆ ಎಷ್ಟು ಹತ್ರ ಆಗತ್ತೆ ಅನ್ನೋದ್ರ ಮೇಲೆ ಅವಲಂಬಿತವಾಗಿರತ್ತೆ.

Mc Donald ಇಡೀ ಜಗತ್ತಿನೆಲ್ಲೆಡೆ ಪ್ರಸಿದ್ದವಾಗಿದೆ. ಇದು ಹುಟ್ಟಿದ್ದು ಅಮೇರಿಕಾದಲ್ಲಾದ್ರೂ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಅಲ್ಲಿನ ಜನರ ಅಭಿರುಚಿಗೆ ತಕ್ಕಂತೆ ತನ್ನನ್ನು ತಾನು ಬದಲಾಯಿಸಿಕೊಂಡು ವಾಪಾರ ಮಾಡ್ತಾ ಇದೆ. ಭಾರತದಲ್ಲೂ ಇದರ ಭರಾಟೆ ಕಮ್ಮಿ ಏನಿಲ್ಲ. ಆದ್ರೆ, ಭಾರತ ಬೇರೆ ದೇಶಗಳಂತೆ ಒಂದೇ-ಒಂದು ನುಡಿಯನ್ನಾಡುವ, ಒಂದೇ-ಒಂದು ಸಂಸ್ಕ್ರುತಿಯಿರುವ ದೇಶವಲ್ಲ. ಇವರು ಇಲ್ಲಿ ಬೆಂಗಳೂರಲ್ಲಿ ಈ
ರೀತಿ ಇಂಗ್ಲೀಷ್-ನಲ್ಲಿ ಬರೆದ ಹಿಂದೀ ಜಾಹೀರಾತುಗಳನ್ನ ಹಾಕೋದ್ರಿಂದ ಇವರು ಯಾರನ್ನ ಸೆಳೀತಿದಾರೆ? ಅಷ್ಟಕ್ಕೂ ಬೆಂಗಳೂರಲ್ಲಿ ಇರೋದು ಬರೀ ಹಿಂದೀ ಮಾತಾಡೋ ಜನರಾ? ಅಥವಾ ಕನ್ನಡಿಗರಿಗೆ ಅವರ ಭಾಷೆಯಲ್ಲಿ ಯಾವುದಾದರೂ ವಿಚಾರ ತಿಳಿಸೋ ಅವಶ್ಯಕತೇನೇ ಇಲ್ಲವೋ? ಹಿಂಗ್ಲಿಷ್ ಜಾಹೀರಾತು ಯಾಕೆ?

ಮೊನ್ನೆ ಮೊನ್ನೆ ಟೀವಿಯಲ್ಲಿ ICICI prudential ಅವರ ಒಂದು ಜಾಹೀರಾತು ಬರ್ತ ಇತ್ತು. ಅಮ್ಮ ಒಬ್ಬಳು ತನ್ನ ತುಂಟ ಮಗನಿಗೆ "ಈಗ ಒಂದ್-ದಮ್ ಸುಮ್ಗಿರು" ಅಂತಾ ಅಂತಾಳೆ ಇದ್ರಲ್ಲಿ.!! ಏನಿದು "ಒಂದ್-ದಮ್"?? ಇದು ಕನ್ನಡಿಗರ್ಯಾರೂ ಬಳಸದ ಭಾಷೆ. ಯೋಚಿಸಿದ್ರೆ ಗೊತ್ತಾಗೋದು ಹಿಂದಿಯ "ಏಕ್-ದಮ್ ಚುಪ್" ಅನ್ನೋದನ್ನ ಈ ರೀತಿ ಕನ್ನಡೀಕರಿಸಿದ್ದಾರೆ.

ಇದೇ ರೀತಿ ಗೋದಿಹಿಟ್ಟು ಆಟ್ಟಾ ಆಗಿದೆ, ಬೇಳೆಗಳು ದಾಲ್ ಆಗಿವೆ, ಗೋಡಂಬಿ-ದ್ರಾಕ್ಷಿಗಳು ಕಾಜು-ಕಿಸ್ಮಿಸ್ ಆಗಿವೆ. "nimbooz" ಅವರ ಟೀ.ವಿ ಜಾಹೀರಾತಿನಲ್ಲಿ ಇರುವುದು ತಮಿಳರು, ತಮಿಳು ಅಂಗಡಿಗಳು. you see, tamil is not glocal to Karnataka. ಹಾಗೇ ಈ ಬಿಗ್-ಬಜಾರ್, ಸ್ಟಾರ್-ಬಜಾರ್ ಮುಂತಾದವರು ನ್ಯೂಸ್ ಪೇಪರ್ನಲ್ಲಿ ಹಾಕುವ ಜಾಹೀರಾತುಗಳು ದೇವರಿಗೇ ಪ್ರೀತಿ. "ಪಟ್ಟು ಪವಡೈ" ಅಂದ್ರೆ ಅದ್ ಯಾರಿಗ್ ಅರ್ಥ ಆಗತ್ತೆ? ಅಚ್ಚುಟ್ಟಾಗಿ ಕನ್ನಡದಲ್ಲಿ "ರೇಶ್ಮೆ ಲಂಗ" ಅಂತ ಬರೀಬಹುದಲ್ವೆ? ಇವರೆಲ್ಲ ಕನ್ನಡವನ್ನ ಕಡೆಗಣಿಸ್ತಿದಾರೆ ಅಂದ್ರೆ ಕನ್ನಡಿಗರನ್ನ ಕಡೆಗಣಿಸ್ತಿದಾರೆ ಅಂತಾನೆ ಅರ್ಥ. ಬೆಂಗಳೂರಿನ ಮಾಲ್-ಗಳಲ್ಲಿ ಅತೀ ಹೆಚ್ಚು ಕೊಳ್ಳುವ ಶಕ್ತಿ ಇರೋದು ಕನ್ನಡಿಗರಿಗೆ.(ಇಲ್ಲಿ ನೋಡಿ). ಹೀಗಿದ್ರೂ ಕನ್ನಡಿಗರು ತಮ್ಮ ಭಾಷೆಯಲ್ಲೆ ಎಲ್ಲಾ ಸೇವೆಗಳನ್ನ ಪಡೆಯುವುದು ಯಾಕೆ ಸಾಧ್ಯ ಆಗ್ತಾ ಇಲ್ಲ? ಪಿಜ್ಜಾ ಹಟ್ನಲ್ಲಿ, ಮಾಕ್-ಡೊನಾಲ್ಡ್ನಲ್ಲಿ ಇನ್ನೂ ಎಲ್ಲೆಲ್ಲೂ by default ಹಿಂದಿ ಹಾಡುಗಳನ್ನ ಹಾಕಿರ್ತಾರೆ. ಕನ್ನಡ ಹಾಡು ಬೇಕುಅಂತ ನಾವು ಅವರಿಗೆ Request ಮಾಡ್ಕೋಬೇಕಂತೆ. ಹೀಗೇ ಇವ್ರು ತಮಿಳ್ನಾಡ್ನಲ್ಲಿ ಹಿಂದಿ ಹಾಕಿರ್ತಾರಾ? ನಮ್ಮ ಊರಲ್ಲಿ ನಮ್ಮ ಭಾಷೆ ಹಾಡು ಕೇಳಕ್ಕೆ ನಾವೇ ಬೇಡ್ಕೋಬೇಕಾ?.

ಇವರೆಲ್ಲರನ್ನ ಸರಿದಾರಿಗೆ ತರಲು ಸಾಧ್ಯ ಇರೋದು ನಮಗೆ ಮಾತ್ರ. ಗ್ರಾಹಕರಾದ ನಮಗೆ ನಮ್ಮ ನುಡಿಯಲ್ಲೇ ಎಲ್ಲಾ ಸೇವೆಗಳನ್ನು ಪಡೆದುಕೊಳ್ಳುವ ಹಕ್ಕಿದೆ.ನಾವು ದುಡ್ಡು ಕೊಟ್ಟು ಕೊಂಡುಕೊಳ್ಳುವ ಯಾವುದೇ ಪದಾರ್ಥಗಳಿಗೆ, ಸೇವೆಗಳಿಗಾಗಿ ನಾವೇ ಬೇರೆಯಾವುದೋ ಭಾಷೆಯನ್ನ ಕಲಿಯಬೇಕಿಲ್ಲ. ಎಲ್ಲೆಲ್ಲಿ ಕನ್ನಡವನ್ನ ಕಡೆಗಣಿಸಿರ್ತಾರೋ ಅಲ್ಲಲ್ಲಿ ನಾವು ಅವರಿಗೆ ದೂರು ನೀಡಿ, ಅವರು ಕನ್ನಡವನ್ನೇ ಬಳಸುವಂತೆ ಮಾಡಬೇಕು. ಇದರಿಂದ ಅವರಿಗೇ ಲಾಭ. ಕರ್ನಾಟಕದಲ್ಲಿ ಹೆಚ್ಚು ಹೆಚ್ಚು ಜನರನ್ನು ತಲುಪಲು ಕನ್ನಡ ಬಳಸಬೇಕೇ ಹೊರತ ಇಂಗ್ಲಿಷ್ ಅಥವಾ ಹಿಂಗ್ಲಿಷ್ ಅಲ್ಲ.

ಶನಿವಾರ, ಮಾರ್ಚ್ 13, 2010

ಆಹಾ ಗಣತಂತ್ರವೇ !!

ಇವತ್ತಿನ ಬಹುತೇಕ ವಾರ್ತಾ ಪತ್ರಿಕೆಗಳಲ್ಲಿ ಬಿ.ಬಿ.ಎಂ.ಪಿ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಪಕ್ಷಗಳ ಬಗ್ಗೆ ಮತ್ತು ಅಭ್ಯರ್ತಿಗಳ ಬಗ್ಗೆ ಬಂದಿದೆ. ಬೆಂಗಳೂರಿನಲ್ಲಿ ಜಯಲಲಿತಾ ಪಕ್ಷವಾದ ಎಐಎಡಿಎಂಕೆ ಈಗಾಗಲೇ ಸುಮಾರು ೧೪ ಜನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.


ಇನ್ನೂ ಹೆಚ್ಚುಜನರ ಹೆಸರುಗಳ ಪಟ್ಟಿಯನ್ನ ಆದಷ್ಟು ಬೇಗ ಬಿಡುಗಡೆ ಮಾಡ್ತಾರಂತೆ ಜಯಲಲಿತಾ ಮೇಡಂ..
ಅಲ್ಲಾ.. ಅಪ್ಪಟ ತಮಿಳುನಾಡಿನ ಪಕ್ಷವಾದ AIADMK (All India ಅಂತ ಹೆಸರಿಟ್ಟುಕೊಂಡ ಮಾತ್ರಕ್ಕೆ ಇವರೇನು ಕರ್ನಾಟಕವನ್ನು ಪ್ರತಿನಿಧಿಸುವವರಾಗಿಬಿಡುವುದಿಲ್ಲ) ಬೆಂಗಳೂರಿನಲ್ಲಿ ಬಿ.ಬಿ.ಎಂ.ಪಿ ಚುನಾವಣೆಯಲ್ಲಿ ತನ್ನ ಜನರನ್ನು ಕಣಕ್ಕಿಳಿಸಿರುವುದರಿಂದ ಬೆಂಗಳೂರಿಗಾಗಲಿ, ಇಲ್ಲಿನ ಕನ್ನಡಿಗರಿಗಾಗಲೀ ಯಾವ ಪ್ರಯೋಜನವಾಗಬಹುದು? ಮೊದಲೇ ಬೆಂಗಳೂರಿನಲ್ಲಿ ಕನ್ನಡದಕೆಲಸಗಳು ನಡೆಯೋದು, ನಡೆಸಿಕೊಳ್ಳೋದು ಎಷ್ಟು ಕಷ್ಟದ ಕೆಲಸ. ನಮ್ಮ ದೇಶದಲ್ಲಿ ಯಾರು ಎಲ್ಲಿ ಹೋದರೂ ಅವರು ಭಾರತೀಯರೇ ಆಗಿರುತ್ತಾರೆ, ನಿಜ. ಆದ್ರೆ, ಈ ರೀತಿ ತಮಿಳು ನಾಡಿನ ಒಂದು ಪ್ರಾದೇಶಿಕ ಪಕ್ಷ ಬೆಂಗಳೂರಿನಲ್ಲಿ ಚುನಾವಣೆಗೆ ನಿಲ್ಲುತ್ತಿರುವಂತೆ, ಒಂದು ಕನ್ನಡದ ಪಕ್ಷ ತಮಿಳುನಾಡಿನ ಚೆನ್ನೈನಲ್ಲಿ ಚುನಾವಣೆಗೆ ನಿಲ್ಲುವುದು ಸಾಧ್ಯ? ಇಲ್ಲ, ಸಧ್ಯಕ್ಕಂತೂ ಇಲ್ಲ.

ಬೆಳಗಾವಿಯಲ್ಲಿ ಕನ್ನಡಿಗರೊಬ್ಬರು ಮೇಯರ್ ಆಗಲು ಅಲ್ಲಿನ ಕನ್ನಡಿಗರು ಸುಮಾರು ೧೮ ವರ್ಷಗಳಕಾಲ ಕಾದುನೋಡಬೇಕಾಯಿತು. ಕರ್ನಾಟಕ ರಕ್ಶಣಾ ವೇದಿಕೆಯ ಹೋರಾಟದ ಫಲವಾಗಿ ಅಲ್ಲಿ ಈ ದಿನ ಮರಾಟಿಗರ ಬದಲಾಗಿ ಕನ್ನಡಿಗರು ತಮ್ಮ ನೆಲದಲ್ಲಿ ತಾವೇ ಅಧಿಕಾರ ಪಡೆಯುವಲ್ಲಿ ಸಫಲರಾಗಿದ್ದಾರೆ.(ನೋಡಿ)

ಇದೇ ರೀತಿ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ತಮಿಳರು ಅಧಿಕಾರಕ್ಕೆ ಬರುವಲ್ಲಿ ಸಫಲರಾದರೆ ಕನ್ನಡಿಗರಿಗೆ ಎಂಥಾ ಅವಮಾನ. ನಮ್ಮ ರಾಜಧಾನಿಯಲ್ಲಿ ನಾವೇ ಅಧಿಕಾರಕ್ಕಾಗಿ ಬಡಿದಾಡಬೇಕೆ? ಅದೂ ಪಕ್ಕದ ತಮಿಳುನಾಡಿನ ಪ್ರಾದೇಶಿಕ ಪಕ್ಷದೊಂದಿಗೆ?

ಕರ್ನಾಟಕ ರಕ್ಷಣಾ ವೇದಿಕೆಯನ್ನ ಒಂದು "fringe group" ಅಂತ ಕರೆಯೋ, ಅವರನ್ನು ಅಥವಾ ಅವರಂತೆ ಕನ್ನಡ, ಕರ್ನಾಟಕಗಳೀಗಾಗಿ ಕೆಲಸ ಮಾಡುವವರನ್ನು, ಹೋರ‍ಾಡುವವರನ್ನು "regional" ಅಂತಾ ಬಿಂಬಿಸೋ ನಮ್ಮ ದೇಶದ English ಮೀಡಿಯಾ ಅಂದ್ರೆ, so called national ಮೀಡಿಯಾ ಎಐಎಡಿಎಂಕೆ ಬಗ್ಗೆ ಏನೂ ಹೇಳದಿರುವುದಕ್ಕೆ ಕಾರಣ ಏನಿರಬಹುದು?(ನೋಡಿ,ಇದೂ ನೋಡಿ) ದೆಲ್ಲಿಯಲ್ಲಿನ ಸರ್ಕಾರವನ್ನ ಹೇಗಾದರೂ ಮಾಡಿ ತಮ್ಮ ಹಿಡಿತದಲ್ಲಿರಿಸಿಕೊಂಡು, ಕೇವಲ ತಮ್ಮ ರಾಜ್ಯಕ್ಕೆ(ಪಕ್ಕದ ರಾಜ್ಯಕ್ಕೆ ಕೆಡುಕು ಮಾಡಿ) ಕೆಲಸಮಾಡುವ ಎಐಎಡಿಎಂಕೆ-ಗೆ ಬೆಂಗಳೂರಿನಲ್ಲಿ ಚುನಾವಣೆಗೆ ನಿಲ್ಲಲು ಯಾವ ಅರ್ಹತೆಗಳಿವೆ? ನಮ್ಮದು ಗಣತಂತ್ರ ಅಂದ ಮಾತ್ರಕ್ಕೆ, ಈ ರೀತಿಯ ಒಂದು ಪ್ರಾದೇಶಿಕ ಪಕ್ಷ ಇನ್ನೊಂದು ರಾಜ್ಯದಲ್ಲಿ ಹೋಗಿ ಚುನಾವಣೆಗೆ ನಿಲ್ಲಬಹುದಾದರೆ, ಇಂತಹ ಒಂದು ವ್ಯವಸ್ಥೆಯಿಂದ ಭಾರತದ ಜನತೆಗೆ ನಿಜವಾದ ಉಪಯೋಗ ಏನೂ ಇಲ್ಲ. ಜಯಲಲಿತಾ, ಮಾಯಾವತಿ ಮುಂತಾದವರು ಕೇವಲ ತಮ್ಮ ತಮ್ಮ ರಾಜ್ಯಗಳಿಗಾಗಿ (ಅದಕ್ಕಿಂತ ಹೆಚ್ಚಾಗಿ ತಮ್ಮ ಒಳಿತಿಗಾಗಿ) ಕೆಲಸಮಾಡುವವರು.

ಬೆಂಗಳೂರಿನ ಬಗ್ಗೆ, ಇಲ್ಲಿನ ಜನರ ಬಗ್ಗೆ, ಇಲ್ಲಿನ ಸಂಸ್ಕೃತಿಯಬಗ್ಗೆ, ಈ ಊರಿನ ಇತಿಹಾಸದ ಬಗ್ಗೆ ಏನೇನೂ ತಿಳುವಳಿಕೆ, ಪ್ರೀತಿಗಳಿಲ್ಲದವರಿಂದ ಬೆಂಗಳೂರಿಗೆ ಒಳಿತಾಗಲು ಹೇಗೆ ಸಾಧ್ಯ? ಸಂವಿಧಾನದ ಪ್ರಕಾರ ಇವರುಗಳು ಬೆಂಗಳೂರಲ್ಲಿ ಬಂದು ಚುನಾವಣೆಗೆ ನಿಲ್ಲುವುದನ್ನು ತಡೆಯಲು ಸಾಧ್ಯವಿಲ್ಲ. ಆದ್ರೆ, ಇವರನ್ನು ಅಧಿಕಾರಕ್ಕೆ ಬರದಂತೆ ತಡೆಯುವುದು ಸಾಧ್ಯವಿದೆ. ಬಿ.ಬಿ.ಎಂ.ಪಿ ಚುನಾವಣೆಯಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕ ರಕ್ಷಣಾ ವೇದಿಕೆ ತನ್ನ ಜನರನ್ನ ಕಣಕ್ಕಿಳಿಸಿದೆ. ಕರ್ನಾಟಕದ ಜನತೆಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿರುವ ಈ ಪಕ್ಷ ಅದಿಕಾರಕ್ಕೆ ಬಂದು, ಬೆಂಗಳೂರಿಗೆ ಒಳ್ಳೆಯದನ್ನು ಮಾಡಲಿ. ಕರ್ನಾಟಕಕ್ಕೆ ಬಹುವರ್ಷಗಳಿಂದ ಅವಶ್ಯವಾಗಿರುವ ಪ್ರಾದೇಶಿಕ ಪಕ್ಷವಾಗಿ ಕ.ರ.ವೇ ಬೆಳೆದು ಕರ್ನಾಟಕಕ್ಕೆ ಒಳ್ಳೆಯದಿನಗಳು ಆರಂಭವಾಗಲಿ ಎನ್ನುವುದೇ ನನ್ನ ಹಾರೈಕೆ.

ಶುಕ್ರವಾರ, ಫೆಬ್ರವರಿ 26, 2010

ನಮ್ಮ ಕನ್ನಡ ಚಿತ್ರರಂಗ ...

ಇತ್ತೀಚಿಗೆ ಸುವರ್ಣ ೨೪*೭ ನಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಒಂದು ಚರ್ಚೆ ನಡೆಯಿತು.. ಇದರಲ್ಲಿ ಮುಕ್ಯವಾಗಿ ಚರ್ಚೆಯಾದ ಅಂಶ ಅಂದ್ರೆ "ಬೇರೆ ಭಾಷೆಯ ಚಿತ್ರಗಳಿಗೆ ಹೋಲಿಸಿದರೆ ಕನ್ನಡ ಚಿತ್ರಗಳು ಗಳಿಕೆಯಲ್ಲಿ ಹಿಂದೆ ಬೀಳುವುದು ಏಕೆ ?"
ಇದಕ್ಕೆ ಚರ್ಚೆಯಲ್ಲಿ ಮೂಡಿಬಂದ ಕಾರಣಗಳು:

೧. ಕನ್ನಡದ ಜನ ಒಂದು ಚಿತ್ರವನ್ನು ಒಂದೇ-ಒಂದು ಬಾರಿ ಕೂಡ ಥಿಯೇಟರ್ನಲ್ಲಿ ನೋಡದೆ, ಆ ಚಿತ್ರ ಚೆನ್ನಾಗಿಲ್ಲ ಅಂತ ನಿರ್ಧರಿಸಿಬಿಡುತ್ತಾರೆ.
ಇದು ಒಂದು ಮಟ್ಟಿಗೆ ನಿಜ. ಕನ್ನಡದವರು ಹಿಂದಿ, ತಮಿಳು, ತೆಲುಗು ಚಿತ್ರಗಳನ್ನು ಚೆನ್ನಾಗಿಲ್ಲದಿದ್ದರೂ ನೋಡುತ್ತಾರೆ. ಕನ್ನಡ ಚಿತ್ರ ಹೇಗಿದೆ ಅಂತ ಪರೀಕ್ಷೆ ಕೂಡ ಮಾಡುವುದಿಲ್ಲ. ಇದಕ್ಕೆ ಏನು ಕಾರಣ ಇರಬಹುದೆಂದು ಯೋಚನೆ ಮಾಡಿದ್ರೆ, ಗೊತ್ತಾಗೋ ವಿಷಯ: ಈ ಬೇರೆ ಭಾಷೆಯವರು ತಮ್ಮ ಚಿತ್ರಗಳಿಗೆ ಪ್ರಚಾರ ನೀಡೋಸಲುವಾಗಿ ಸಾಕಷ್ಟು ಶ್ರಮವಹಿಸುತ್ತಾರೆ ಮತ್ತು ಹಣವನ್ನೂ ಖರ್ಚು ಮಾಡುತ್ತಾರೆ. ನನಗೆ ಕೂಡ ಇದು ಸರಿ ಅನ್ನಿಸಿತು.

ಹಿಂದಿ ಚಿತ್ರಗಳ ತಯಾರಕರು ಅವರಿಗೆ ದೊರಕುವ ಎಲ್ಲ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಾರೆ. ಅ ಚಿತ್ರಗಳ ನಟ ನಟಿಯರು ಸಾಕಷ್ಟು ಪ್ರಚಾರಗಳನ್ನು ಮಾಡ್ತಾರೆ. ಸಿಕ್ಕ ಸಿಕ್ಕ ಕಾರ್ಯಕ್ರಮಗಳಿಗೆಲ್ಲ ಹೋಗಿ ತಮ್ಮ ಚಿತ್ರಗಳ ಬಗ್ಗೆ ತಿಳಿಸುತ್ತಾರೆ. ಆದ್ರೆ ಇತ್ತೀಚಿಗೆ ಕನ್ನಡ ಚಿತ್ರರಂಗ ಕೂಡ ಈ ನಿಟ್ಟಿನಲ್ಲಿ ಬದಲಾಗ್ತಾ ಇದೆ ಅನ್ನಬಹುದು. ಮಾ: ಸೂರ್ಯಕಾಂತಿ ಚಿತ್ರಕ್ಕಾಗಿ ಚೇತನ್ ಮತ್ತು ರೆಜೀನ ಒಂದು ಷೋ ನಡೆಸಿದರು. ರಮೇಶ್ ಅರವಿಂದ್ ಅವರ "ಕ್ರೇಜಿ ಕುಟುಂಬ" ದ ಇಡೀ ಚಿತ್ರತಂಡ ಜೀ ಕನ್ನಡದ "ಸಾಲಕ್ಕೊಂದು ಸಲಾಂ" ಕಾರ್ಯಕ್ರಮಕ್ಕೆ ಬಂದಿತ್ತು. ಗಣೇಶ್ ಕೂಡ ಕೋಕ ಕೋಲಾ ದೊಂದಿಗೆ "ಮಳೆಯಲಿ ಜೊತೆಯಲಿ"ಗಾಗಿ ಸಾಕಷ್ಟು ಪ್ರಚಾರ ಮಾಡಿದ್ರು. ಇಲ್ಲಿ ಇಬ್ಬಗೆಯ ಲಾಭವನ್ನ ಕಾಣಬಹುದು. ಪ್ರಚಾರದಿಂದ ಕನ್ನಡ ಚಿತ್ರರಂಗಕ್ಕೆ ಒಳಿತಾಗುವಂತೆ ಈ ಕಂಪನಿಗಳು ಕೂಡ ಕರ್ನಾಟಕದಲ್ಲಿ, ಕನ್ನಡಿಗರ ನಡುವೆ ತಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳುತ್ತಾರೆ. ಇದು ಖಂಡಿತ ಒಳ್ಳೆಯ ಬೆಳವಣಿಗೆ.

೨. ಈ ಪ್ರಚಾರದ ಅಂಶ ಬಿಟ್ಟರೆ ಕನ್ನಡ ಜನರಿಗೆ ಕನ್ನಡ ಚಿತ್ರಗಳ ಬಗ್ಗೆ ಕೀಳರಿಮೆ ಇರಬಹುದು. ಕನ್ನಡ ಚಿತ್ರಗಳು ಚೆನ್ನಾಗಿರುವುದಿಲ್ಲ ಅಂತ ಜನ ತಮ್ಮ ಮನಸ್ಸಿನಲ್ಲಿ ಮೊದಲೇ ನಿರ್ಧಾರ ಮಾಡಿಕೊಂಡಿರಬಹುದು. ಕನ್ನಡ ಚಿತ್ರರಂಗ ತನ್ನ "brand value"ವನ್ನ ಹೆಚ್ಚಿಸಿಕೊಳ್ಳಬೇಕು. ಇದಕ್ಕೆ ಇರುವ ದಾರಿ ಕೂಡ ಪ್ರಚಾರ, ಪ್ರಚಾರ.. ಪ್ರಚಾರ.

೩. ಕನ್ನಡ ಚಿತ್ರರಂಗದ ಮತ್ತೊಂದು ಸಮಸ್ಯೆ , ಕರ್ನಾಟಕದ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳಿಗಿಂತ ಹೆಚ್ಚಾಗಿ ಬೇರೆ ಭಾಷೆಯ ಚಿತ್ರಗಳು ಪ್ರಸಾರ ಆಗೋದು. ಒಬ್ಬ ಕನ್ನಡಿಗ ಒಂದು ಒಳ್ಳೆ ಕನ್ನಡ ಚಿತ್ರದ ಬಗ್ಗೆ ನ್ಯೂಸ್ ಪೇಪರ್ನಲ್ಲಿ ಓದಿ, ಅದನ್ನ ಈ ವಾರವೋ ಇಲ್ಲ ಮುಂದಿನ ವಾರವೋ ನೋಡೋಣವೆಂದು ಯೋಚನೆ ಮಾಡಿರ್ತಾನೆ. ಆದ್ರೆ ಆತ ಹೋಗಿ ನೋಡುವಷ್ಟರಲ್ಲಿ ಅ ಚಿತ್ರ ಅಲ್ಲಿಂದ ಎತ್ತಂಗಡಿಯಾಗಿ ಇನ್ನ್ಯಾವುದೋ ಚಿತ್ರ ಬಂದಿರುತ್ತದೆ.ಈ ಸಮಸ್ಯೆಯನ್ನ ಬಗೆಹರಿಸಲು ಸಾಧ್ಯ ಇರೋದು ಕರ್ನಾಟಕದ ಸರ್ಕಾರಕ್ಕೆ ಮಾತ್ರ.
ಈ ವಿಷಯಕ್ಕೆ ಸಂಭಂದಿಸಿದಂತೆ ಕರ್ನಾಟಕದಲ್ಲಿ ಸಾಕಷ್ಟು ಹೋರಾಟಗಳು ನಡೆದಿವೆ. ನೋಡಿ . ಇದರಬಗ್ಗೆ ಒಂದು ದಿಟ್ಟ ನಿಲುವನ್ನು ತಾಳಿ ಅದನ್ನು ಜಾರಿಗೆ ತರುವುದು ಇದುವರೆಗೂ ಸಾಧ್ಯವಾಗಿಲ್ಲ. ಸಾಕಷ್ಟು ಕನ್ನಡ ಚಿತ್ರಗಳು ನಷ್ಟ ಅನುಭವಿಸಲು ಇದೇ ಮುಖ್ಯ ಕಾರಣ. ನೋಡಿ

೪. ಈ ಕಾರ್ಯಕ್ರಮದಲ್ಲಿ ಚರ್ಚೆಯಾದ ಇನ್ನೊಂದು ವಿಷಯ: ತೆಲುಗು ಮತ್ತು ತಮಿಳು ಚಿತ್ರರಂಗವನ್ನು ಅಲ್ಲಿನ ಜನರು ಆರಾಧಿಸುತ್ತಾರೆ. ಯಾಕಂದ್ರೆ, ಅ ಚಿತ್ರರಂಗದ ನಾಯಕರು ಆ ರಾಜ್ಯದಲ್ಲಿ ಏನಾದರು ತೊಂದರೆ ಆದ್ರೆ, ನೆರೆ ಆದ್ರೆ, ನದಿ ನಿರು ವಿವಾದ ಆದ್ರೆ, ತಮ್ಮ ರಾಜ್ಯದ ಜನತೆಯೊಂದಿಗೆ ನಿಲ್ತಾರೆ. ತಮ್ಮ ಜನಗಳನ್ನ ಪ್ರತಿನಿಧಿಸಲು ಅವರೆಂದೂ ಹಿಂಜರಿಯುವುದಿಲ್ಲ. ಈ ರೀತಿ ಕನ್ನಡ ಚಿತ್ರರಂಗದಲ್ಲಿ ನಡೆದಿರುವುದು ಬಹಳ ಕಮ್ಮಿ. (ಗೋಕಾಕ್ ಕನ್ನಡ ಚಳುವಳಿಗಾಗಿ ರಾಜ್ ಬಂದದ್ದು, ನಂತರ ಇತರರು ಬಂದು ಸೇರಿದ್ದು.) ನನ್ನ ಪ್ರಕಾರ ಇದು ಸರಿ. ಕನ್ನಡದ ಕೆಲವೇ ಕೆಲವು ನಾಯಕ -ನಾಯಕಿಯರು ಮಾತ್ರ ಜನರ ಬಳಿ ಹೋಗಿರುವರು. ನಾಯಕ-ನಾಯಕಿಯರು ಕರ್ನಾಟಕಕ್ಕಾಗಿ ಎದ್ದು ನಿಲ್ಲುವ ಸಮಯಲ್ಲಿ ತಾವಾಯ್ತು-ತಮ್ಮ ಕೆಲಸವಾಯ್ತು ಅಂತ ಇದ್ದುಬಿಡುತ್ತಾರೆ. ಇವರು ಜನರನ್ನು ತಮ್ಮವರನ್ನಾಗಿ ಕಂಡಾಗ ಮಾತ್ರ ಜನರು ಕೂಡ ಇವರೊಂದಿದಿಗೆ ತಮ್ಮನ್ನು ತಾವು ಬೆಸೆದುಕೊಳ್ಳಬಹುದು. ನಮ್ಮ ಚಿತ್ರರಂಗದವರಿಗೆ ಇದೊಂದು ಮುಖ್ಯ "feedback".

ಇದಲ್ಲದೇ ನನಗೆ ಅನ್ನಿಸುವ ವಿಶಯಗಳು, ಕನ್ನಡದಲ್ಲಿ ನಾಯಕಿಯರು ಸಾಕಷ್ಟು ಬೇರೆ ಭಾಷೆಯವರಾಗಿರುತ್ತಾರೆ. ಎಲ್ಲೋ ಒಂದು-ಎರಡು ಚಿತ್ರ ಮಾಡಿ ಬೇರೆ ಕಡೆ ಹಾರ್ತಾರೆ. ಇದಕ್ಕೆ ಕೆಲವು ಅಪವಾದಗಳೂ ಇವೆ. ಆದ್ರೆ ಸಾಮಾನ್ಯವಾದದ್ದು ಇದು. ಇವರಿಗೆ ಕನ್ನಡ ಬರಲ್ಲ. ಅವರ ಮಾತುಗಳಿಗೆ ಡಬ್ಬಿಂಗ್ ಮಾಡಿರುವುದು ಕೆಲವೊಂದು ಚಿತ್ರಗಳಲ್ಲಿ ಕೆಟ್ಟದಾಗಿ ಬಂದಿರುತ್ತದೆ. ನಾಯಕಿಯರ ಮಾತುಗಳು ಅವರಿಂದಲೇ ಬಂದಿದ್ರೆ, ಆ ಚಿತ್ರ ನೋಡೋದಲ್ಲಿ ಸಿಗೋ ಮಜಾನೇ ಬೇರೆ.

ಹಿಂದಿ, ತಮಿಳ್ ಮತ್ತು ತೆಲುಗು ಚಿತ್ರಗಳನ್ನ ತಮ್ಮ ರಾಜ್ಯಗಳಿಗೆ ಮಾತ್ರ ಇಲ್ಲವೇ ಭಾರತಕ್ಕೆ ಮಾತ್ರ ಸೀಮಿತವಾಗಿಟ್ಟುಕೊಂಡಿರುವುದಿಲ್ಲ. ಬೇರೆ-ಬೇರೆ ರಾಜ್ಯಗಳಲ್ಲಿ, ದೇಶಗಳಲ್ಲಿ ಪ್ರಸಾರ ಮತ್ತು ಪ್ರಚಾರ ಎರಡನ್ನೂ ಮಾಡ್ತಾರೆ. ಕನ್ನಡ ಚಿತ್ರರಂಗ ಇಲ್ಲಿ ಖಂಡಿತ ಹಿಂದೆ ಬಿದ್ದಿದೆ. ಬೇರೆ ರಾಜ್ಯಗಳ ಮತ್ತು ದೇಶಗಳ ಮಾರುಕಟ್ಟೆಯ ಹಂಚಿಕೆಯನ್ನ ಕನ್ನಡ ಚಿತ್ರರಂಗ ಬೆಳೆಸಿಕೊಳ್ಳಬೇಕು. ಆದ್ರೆ ಇದರ ಹಿಂದೆ ಸಾಕಷ್ಟು ರಾಜಕೀಯ ನಡೆಯಬೇಕೆಂದು ನನ್ನ ಅನಿಸಿಕೆ. ಹೇಗೆ ಬೇರೆ ಭಾಷೆಯವರು ನಮ್ಮ ರಾಜ್ಯದಲ್ಲಿ ಬಂದು ತಮ್ಮ ಚಿತ್ರಗಳನ್ನು ರಾಜಾರೋಷವಾಗಿ ಪ್ರಸಾರ ಮಾಡುತ್ತಾರೋ ಅದೇ ರೀತಿ ಇಲ್ಲಿಯವರು ಮಾಡಬೇಕಾದ್ರೆ ಖಂಡಿತ ಕೆಲವು ಘಟಾನುಘಟಿಗಳ ನೆರವು ಬೇಕು, ಇಚ್ಚಾಶಕ್ತಿ ಬೇಕು.
UTV world movies ಅನ್ನೋ ಚ್ಯಾನಲ್ ಬಗೆ ಗೊತ್ತಿರಬಹುದು. ಇದರಲ್ಲಿ ಅಂತರ್ರಾಷ್ಟ್ರೀಯಮಟ್ಟದಲ್ಲಿ ಮನ್ನಣೆ ಪಡೆದ ಚಿತ್ರಗಳು ಬರುತ್ತವೆ. ಇದರಲ್ಲಿ ಒಮ್ಮೆ "Indian movies" ಅನ್ನೋ ಕಾರ್ಯಕ್ರಮದಡಿಯಲ್ಲಿ ಕೇವಲ ಹಿಂದಿ ಚಿತ್ರಗಳು ಮೂಡಿಬಂದಿದ್ದವು. ಕನ್ನಡ ಚಿತ್ರಗಳು "parallel cinema"ದಡಿಯಲ್ಲಿ ದೇಶ-ವಿದೇಶಗಳಲ್ಲಿ ಸಾಕಷ್ಟು ಹೆಸರು ಮಾಡಿ, ಬಹಳಷ್ಟು ಅವಾರ್ಡ್ಗಳನ್ನು ಪಡೆದುಕೊಂಡಿದ್ದರೂ ಕೂಡ "national media" ಎಂದು ಕರೆಸಿಕೊಳ್ಳುವ ಚ್ಯಾನಲ್-ಗಳು ಭಾರತ ಚಿತ್ರರಂಗ ಅಂದ್ರೆ ಹಿಂದಿ ಚಿತ್ರರಂಗ ಮಾತ್ರ ಅಂತ ತಿಳಿದಿರುವುದು ದುರದ್ರುಷ್ಟಕರ. ಇಂತಹ ಚ್ಯಾನಲ್ಗಳ ನೋಡುಗರಾದ ನಾವು ಇವರುಗಳ ಈ ನಿಲುವನ್ನು ಬದಲಾಯಿಸಬಹುದು. ಕನ್ನಡ ಚಿತ್ರರಂಗ ಎಂತೆಂತಹ ಒಳ್ಳೆಯ ಚಿತ್ರಗಳನ್ನು ಹೊರತಂದಿದೆ. ಇವುಗಳಬಗ್ಗೆ ಇವರಿಗೆಲ್ಲ ತಿಳಿಸಬೇಕು.

ಸಧ್ಯಕ್ಕೆ ನಮ್ಮ ಡಾ||ವಿಷ್ಣುವರ್ಧನ್ ಅವರ ಆಪ್ತರಕ್ಷಕ ಭರ್ಜರಿ ಗಳಿಕೆಯತ್ತ ಮುನ್ನಡೆದಿರುವುದು ನಮಗೆಲ್ಲಾ ಸಂತಸದ ಸುದ್ದಿ. ಕನ್ನಡ ಚಿತ್ರ ರಂಗ ಇನ್ನೂ ಹೆಚ್ಚು ಬೆಳೆದು ಭಾರತದಲ್ಲಿ, ಜಗತ್ತಿನಲ್ಲಿ ಅದಕ್ಕೆ ಸಿಕ್ಕಬೇಕಾದ ಜಾಗವನ್ನ ಅದು ಪಡಿಬೇಕು ಅನ್ನೋದೆ ನನ್ನ ಹಾರೈಕೆ.

AddThis

Bookmark and Share