ಶುಕ್ರವಾರ, ಫೆಬ್ರವರಿ 26, 2010

ನಮ್ಮ ಕನ್ನಡ ಚಿತ್ರರಂಗ ...

ಇತ್ತೀಚಿಗೆ ಸುವರ್ಣ ೨೪*೭ ನಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಒಂದು ಚರ್ಚೆ ನಡೆಯಿತು.. ಇದರಲ್ಲಿ ಮುಕ್ಯವಾಗಿ ಚರ್ಚೆಯಾದ ಅಂಶ ಅಂದ್ರೆ "ಬೇರೆ ಭಾಷೆಯ ಚಿತ್ರಗಳಿಗೆ ಹೋಲಿಸಿದರೆ ಕನ್ನಡ ಚಿತ್ರಗಳು ಗಳಿಕೆಯಲ್ಲಿ ಹಿಂದೆ ಬೀಳುವುದು ಏಕೆ ?"
ಇದಕ್ಕೆ ಚರ್ಚೆಯಲ್ಲಿ ಮೂಡಿಬಂದ ಕಾರಣಗಳು:

೧. ಕನ್ನಡದ ಜನ ಒಂದು ಚಿತ್ರವನ್ನು ಒಂದೇ-ಒಂದು ಬಾರಿ ಕೂಡ ಥಿಯೇಟರ್ನಲ್ಲಿ ನೋಡದೆ, ಆ ಚಿತ್ರ ಚೆನ್ನಾಗಿಲ್ಲ ಅಂತ ನಿರ್ಧರಿಸಿಬಿಡುತ್ತಾರೆ.
ಇದು ಒಂದು ಮಟ್ಟಿಗೆ ನಿಜ. ಕನ್ನಡದವರು ಹಿಂದಿ, ತಮಿಳು, ತೆಲುಗು ಚಿತ್ರಗಳನ್ನು ಚೆನ್ನಾಗಿಲ್ಲದಿದ್ದರೂ ನೋಡುತ್ತಾರೆ. ಕನ್ನಡ ಚಿತ್ರ ಹೇಗಿದೆ ಅಂತ ಪರೀಕ್ಷೆ ಕೂಡ ಮಾಡುವುದಿಲ್ಲ. ಇದಕ್ಕೆ ಏನು ಕಾರಣ ಇರಬಹುದೆಂದು ಯೋಚನೆ ಮಾಡಿದ್ರೆ, ಗೊತ್ತಾಗೋ ವಿಷಯ: ಈ ಬೇರೆ ಭಾಷೆಯವರು ತಮ್ಮ ಚಿತ್ರಗಳಿಗೆ ಪ್ರಚಾರ ನೀಡೋಸಲುವಾಗಿ ಸಾಕಷ್ಟು ಶ್ರಮವಹಿಸುತ್ತಾರೆ ಮತ್ತು ಹಣವನ್ನೂ ಖರ್ಚು ಮಾಡುತ್ತಾರೆ. ನನಗೆ ಕೂಡ ಇದು ಸರಿ ಅನ್ನಿಸಿತು.

ಹಿಂದಿ ಚಿತ್ರಗಳ ತಯಾರಕರು ಅವರಿಗೆ ದೊರಕುವ ಎಲ್ಲ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಾರೆ. ಅ ಚಿತ್ರಗಳ ನಟ ನಟಿಯರು ಸಾಕಷ್ಟು ಪ್ರಚಾರಗಳನ್ನು ಮಾಡ್ತಾರೆ. ಸಿಕ್ಕ ಸಿಕ್ಕ ಕಾರ್ಯಕ್ರಮಗಳಿಗೆಲ್ಲ ಹೋಗಿ ತಮ್ಮ ಚಿತ್ರಗಳ ಬಗ್ಗೆ ತಿಳಿಸುತ್ತಾರೆ. ಆದ್ರೆ ಇತ್ತೀಚಿಗೆ ಕನ್ನಡ ಚಿತ್ರರಂಗ ಕೂಡ ಈ ನಿಟ್ಟಿನಲ್ಲಿ ಬದಲಾಗ್ತಾ ಇದೆ ಅನ್ನಬಹುದು. ಮಾ: ಸೂರ್ಯಕಾಂತಿ ಚಿತ್ರಕ್ಕಾಗಿ ಚೇತನ್ ಮತ್ತು ರೆಜೀನ ಒಂದು ಷೋ ನಡೆಸಿದರು. ರಮೇಶ್ ಅರವಿಂದ್ ಅವರ "ಕ್ರೇಜಿ ಕುಟುಂಬ" ದ ಇಡೀ ಚಿತ್ರತಂಡ ಜೀ ಕನ್ನಡದ "ಸಾಲಕ್ಕೊಂದು ಸಲಾಂ" ಕಾರ್ಯಕ್ರಮಕ್ಕೆ ಬಂದಿತ್ತು. ಗಣೇಶ್ ಕೂಡ ಕೋಕ ಕೋಲಾ ದೊಂದಿಗೆ "ಮಳೆಯಲಿ ಜೊತೆಯಲಿ"ಗಾಗಿ ಸಾಕಷ್ಟು ಪ್ರಚಾರ ಮಾಡಿದ್ರು. ಇಲ್ಲಿ ಇಬ್ಬಗೆಯ ಲಾಭವನ್ನ ಕಾಣಬಹುದು. ಪ್ರಚಾರದಿಂದ ಕನ್ನಡ ಚಿತ್ರರಂಗಕ್ಕೆ ಒಳಿತಾಗುವಂತೆ ಈ ಕಂಪನಿಗಳು ಕೂಡ ಕರ್ನಾಟಕದಲ್ಲಿ, ಕನ್ನಡಿಗರ ನಡುವೆ ತಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳುತ್ತಾರೆ. ಇದು ಖಂಡಿತ ಒಳ್ಳೆಯ ಬೆಳವಣಿಗೆ.

೨. ಈ ಪ್ರಚಾರದ ಅಂಶ ಬಿಟ್ಟರೆ ಕನ್ನಡ ಜನರಿಗೆ ಕನ್ನಡ ಚಿತ್ರಗಳ ಬಗ್ಗೆ ಕೀಳರಿಮೆ ಇರಬಹುದು. ಕನ್ನಡ ಚಿತ್ರಗಳು ಚೆನ್ನಾಗಿರುವುದಿಲ್ಲ ಅಂತ ಜನ ತಮ್ಮ ಮನಸ್ಸಿನಲ್ಲಿ ಮೊದಲೇ ನಿರ್ಧಾರ ಮಾಡಿಕೊಂಡಿರಬಹುದು. ಕನ್ನಡ ಚಿತ್ರರಂಗ ತನ್ನ "brand value"ವನ್ನ ಹೆಚ್ಚಿಸಿಕೊಳ್ಳಬೇಕು. ಇದಕ್ಕೆ ಇರುವ ದಾರಿ ಕೂಡ ಪ್ರಚಾರ, ಪ್ರಚಾರ.. ಪ್ರಚಾರ.

೩. ಕನ್ನಡ ಚಿತ್ರರಂಗದ ಮತ್ತೊಂದು ಸಮಸ್ಯೆ , ಕರ್ನಾಟಕದ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳಿಗಿಂತ ಹೆಚ್ಚಾಗಿ ಬೇರೆ ಭಾಷೆಯ ಚಿತ್ರಗಳು ಪ್ರಸಾರ ಆಗೋದು. ಒಬ್ಬ ಕನ್ನಡಿಗ ಒಂದು ಒಳ್ಳೆ ಕನ್ನಡ ಚಿತ್ರದ ಬಗ್ಗೆ ನ್ಯೂಸ್ ಪೇಪರ್ನಲ್ಲಿ ಓದಿ, ಅದನ್ನ ಈ ವಾರವೋ ಇಲ್ಲ ಮುಂದಿನ ವಾರವೋ ನೋಡೋಣವೆಂದು ಯೋಚನೆ ಮಾಡಿರ್ತಾನೆ. ಆದ್ರೆ ಆತ ಹೋಗಿ ನೋಡುವಷ್ಟರಲ್ಲಿ ಅ ಚಿತ್ರ ಅಲ್ಲಿಂದ ಎತ್ತಂಗಡಿಯಾಗಿ ಇನ್ನ್ಯಾವುದೋ ಚಿತ್ರ ಬಂದಿರುತ್ತದೆ.ಈ ಸಮಸ್ಯೆಯನ್ನ ಬಗೆಹರಿಸಲು ಸಾಧ್ಯ ಇರೋದು ಕರ್ನಾಟಕದ ಸರ್ಕಾರಕ್ಕೆ ಮಾತ್ರ.
ಈ ವಿಷಯಕ್ಕೆ ಸಂಭಂದಿಸಿದಂತೆ ಕರ್ನಾಟಕದಲ್ಲಿ ಸಾಕಷ್ಟು ಹೋರಾಟಗಳು ನಡೆದಿವೆ. ನೋಡಿ . ಇದರಬಗ್ಗೆ ಒಂದು ದಿಟ್ಟ ನಿಲುವನ್ನು ತಾಳಿ ಅದನ್ನು ಜಾರಿಗೆ ತರುವುದು ಇದುವರೆಗೂ ಸಾಧ್ಯವಾಗಿಲ್ಲ. ಸಾಕಷ್ಟು ಕನ್ನಡ ಚಿತ್ರಗಳು ನಷ್ಟ ಅನುಭವಿಸಲು ಇದೇ ಮುಖ್ಯ ಕಾರಣ. ನೋಡಿ

೪. ಈ ಕಾರ್ಯಕ್ರಮದಲ್ಲಿ ಚರ್ಚೆಯಾದ ಇನ್ನೊಂದು ವಿಷಯ: ತೆಲುಗು ಮತ್ತು ತಮಿಳು ಚಿತ್ರರಂಗವನ್ನು ಅಲ್ಲಿನ ಜನರು ಆರಾಧಿಸುತ್ತಾರೆ. ಯಾಕಂದ್ರೆ, ಅ ಚಿತ್ರರಂಗದ ನಾಯಕರು ಆ ರಾಜ್ಯದಲ್ಲಿ ಏನಾದರು ತೊಂದರೆ ಆದ್ರೆ, ನೆರೆ ಆದ್ರೆ, ನದಿ ನಿರು ವಿವಾದ ಆದ್ರೆ, ತಮ್ಮ ರಾಜ್ಯದ ಜನತೆಯೊಂದಿಗೆ ನಿಲ್ತಾರೆ. ತಮ್ಮ ಜನಗಳನ್ನ ಪ್ರತಿನಿಧಿಸಲು ಅವರೆಂದೂ ಹಿಂಜರಿಯುವುದಿಲ್ಲ. ಈ ರೀತಿ ಕನ್ನಡ ಚಿತ್ರರಂಗದಲ್ಲಿ ನಡೆದಿರುವುದು ಬಹಳ ಕಮ್ಮಿ. (ಗೋಕಾಕ್ ಕನ್ನಡ ಚಳುವಳಿಗಾಗಿ ರಾಜ್ ಬಂದದ್ದು, ನಂತರ ಇತರರು ಬಂದು ಸೇರಿದ್ದು.) ನನ್ನ ಪ್ರಕಾರ ಇದು ಸರಿ. ಕನ್ನಡದ ಕೆಲವೇ ಕೆಲವು ನಾಯಕ -ನಾಯಕಿಯರು ಮಾತ್ರ ಜನರ ಬಳಿ ಹೋಗಿರುವರು. ನಾಯಕ-ನಾಯಕಿಯರು ಕರ್ನಾಟಕಕ್ಕಾಗಿ ಎದ್ದು ನಿಲ್ಲುವ ಸಮಯಲ್ಲಿ ತಾವಾಯ್ತು-ತಮ್ಮ ಕೆಲಸವಾಯ್ತು ಅಂತ ಇದ್ದುಬಿಡುತ್ತಾರೆ. ಇವರು ಜನರನ್ನು ತಮ್ಮವರನ್ನಾಗಿ ಕಂಡಾಗ ಮಾತ್ರ ಜನರು ಕೂಡ ಇವರೊಂದಿದಿಗೆ ತಮ್ಮನ್ನು ತಾವು ಬೆಸೆದುಕೊಳ್ಳಬಹುದು. ನಮ್ಮ ಚಿತ್ರರಂಗದವರಿಗೆ ಇದೊಂದು ಮುಖ್ಯ "feedback".

ಇದಲ್ಲದೇ ನನಗೆ ಅನ್ನಿಸುವ ವಿಶಯಗಳು, ಕನ್ನಡದಲ್ಲಿ ನಾಯಕಿಯರು ಸಾಕಷ್ಟು ಬೇರೆ ಭಾಷೆಯವರಾಗಿರುತ್ತಾರೆ. ಎಲ್ಲೋ ಒಂದು-ಎರಡು ಚಿತ್ರ ಮಾಡಿ ಬೇರೆ ಕಡೆ ಹಾರ್ತಾರೆ. ಇದಕ್ಕೆ ಕೆಲವು ಅಪವಾದಗಳೂ ಇವೆ. ಆದ್ರೆ ಸಾಮಾನ್ಯವಾದದ್ದು ಇದು. ಇವರಿಗೆ ಕನ್ನಡ ಬರಲ್ಲ. ಅವರ ಮಾತುಗಳಿಗೆ ಡಬ್ಬಿಂಗ್ ಮಾಡಿರುವುದು ಕೆಲವೊಂದು ಚಿತ್ರಗಳಲ್ಲಿ ಕೆಟ್ಟದಾಗಿ ಬಂದಿರುತ್ತದೆ. ನಾಯಕಿಯರ ಮಾತುಗಳು ಅವರಿಂದಲೇ ಬಂದಿದ್ರೆ, ಆ ಚಿತ್ರ ನೋಡೋದಲ್ಲಿ ಸಿಗೋ ಮಜಾನೇ ಬೇರೆ.

ಹಿಂದಿ, ತಮಿಳ್ ಮತ್ತು ತೆಲುಗು ಚಿತ್ರಗಳನ್ನ ತಮ್ಮ ರಾಜ್ಯಗಳಿಗೆ ಮಾತ್ರ ಇಲ್ಲವೇ ಭಾರತಕ್ಕೆ ಮಾತ್ರ ಸೀಮಿತವಾಗಿಟ್ಟುಕೊಂಡಿರುವುದಿಲ್ಲ. ಬೇರೆ-ಬೇರೆ ರಾಜ್ಯಗಳಲ್ಲಿ, ದೇಶಗಳಲ್ಲಿ ಪ್ರಸಾರ ಮತ್ತು ಪ್ರಚಾರ ಎರಡನ್ನೂ ಮಾಡ್ತಾರೆ. ಕನ್ನಡ ಚಿತ್ರರಂಗ ಇಲ್ಲಿ ಖಂಡಿತ ಹಿಂದೆ ಬಿದ್ದಿದೆ. ಬೇರೆ ರಾಜ್ಯಗಳ ಮತ್ತು ದೇಶಗಳ ಮಾರುಕಟ್ಟೆಯ ಹಂಚಿಕೆಯನ್ನ ಕನ್ನಡ ಚಿತ್ರರಂಗ ಬೆಳೆಸಿಕೊಳ್ಳಬೇಕು. ಆದ್ರೆ ಇದರ ಹಿಂದೆ ಸಾಕಷ್ಟು ರಾಜಕೀಯ ನಡೆಯಬೇಕೆಂದು ನನ್ನ ಅನಿಸಿಕೆ. ಹೇಗೆ ಬೇರೆ ಭಾಷೆಯವರು ನಮ್ಮ ರಾಜ್ಯದಲ್ಲಿ ಬಂದು ತಮ್ಮ ಚಿತ್ರಗಳನ್ನು ರಾಜಾರೋಷವಾಗಿ ಪ್ರಸಾರ ಮಾಡುತ್ತಾರೋ ಅದೇ ರೀತಿ ಇಲ್ಲಿಯವರು ಮಾಡಬೇಕಾದ್ರೆ ಖಂಡಿತ ಕೆಲವು ಘಟಾನುಘಟಿಗಳ ನೆರವು ಬೇಕು, ಇಚ್ಚಾಶಕ್ತಿ ಬೇಕು.
UTV world movies ಅನ್ನೋ ಚ್ಯಾನಲ್ ಬಗೆ ಗೊತ್ತಿರಬಹುದು. ಇದರಲ್ಲಿ ಅಂತರ್ರಾಷ್ಟ್ರೀಯಮಟ್ಟದಲ್ಲಿ ಮನ್ನಣೆ ಪಡೆದ ಚಿತ್ರಗಳು ಬರುತ್ತವೆ. ಇದರಲ್ಲಿ ಒಮ್ಮೆ "Indian movies" ಅನ್ನೋ ಕಾರ್ಯಕ್ರಮದಡಿಯಲ್ಲಿ ಕೇವಲ ಹಿಂದಿ ಚಿತ್ರಗಳು ಮೂಡಿಬಂದಿದ್ದವು. ಕನ್ನಡ ಚಿತ್ರಗಳು "parallel cinema"ದಡಿಯಲ್ಲಿ ದೇಶ-ವಿದೇಶಗಳಲ್ಲಿ ಸಾಕಷ್ಟು ಹೆಸರು ಮಾಡಿ, ಬಹಳಷ್ಟು ಅವಾರ್ಡ್ಗಳನ್ನು ಪಡೆದುಕೊಂಡಿದ್ದರೂ ಕೂಡ "national media" ಎಂದು ಕರೆಸಿಕೊಳ್ಳುವ ಚ್ಯಾನಲ್-ಗಳು ಭಾರತ ಚಿತ್ರರಂಗ ಅಂದ್ರೆ ಹಿಂದಿ ಚಿತ್ರರಂಗ ಮಾತ್ರ ಅಂತ ತಿಳಿದಿರುವುದು ದುರದ್ರುಷ್ಟಕರ. ಇಂತಹ ಚ್ಯಾನಲ್ಗಳ ನೋಡುಗರಾದ ನಾವು ಇವರುಗಳ ಈ ನಿಲುವನ್ನು ಬದಲಾಯಿಸಬಹುದು. ಕನ್ನಡ ಚಿತ್ರರಂಗ ಎಂತೆಂತಹ ಒಳ್ಳೆಯ ಚಿತ್ರಗಳನ್ನು ಹೊರತಂದಿದೆ. ಇವುಗಳಬಗ್ಗೆ ಇವರಿಗೆಲ್ಲ ತಿಳಿಸಬೇಕು.

ಸಧ್ಯಕ್ಕೆ ನಮ್ಮ ಡಾ||ವಿಷ್ಣುವರ್ಧನ್ ಅವರ ಆಪ್ತರಕ್ಷಕ ಭರ್ಜರಿ ಗಳಿಕೆಯತ್ತ ಮುನ್ನಡೆದಿರುವುದು ನಮಗೆಲ್ಲಾ ಸಂತಸದ ಸುದ್ದಿ. ಕನ್ನಡ ಚಿತ್ರ ರಂಗ ಇನ್ನೂ ಹೆಚ್ಚು ಬೆಳೆದು ಭಾರತದಲ್ಲಿ, ಜಗತ್ತಿನಲ್ಲಿ ಅದಕ್ಕೆ ಸಿಕ್ಕಬೇಕಾದ ಜಾಗವನ್ನ ಅದು ಪಡಿಬೇಕು ಅನ್ನೋದೆ ನನ್ನ ಹಾರೈಕೆ.

3 ಕಾಮೆಂಟ್‌ಗಳು:

AddThis

Bookmark and Share