ಇದು ನಮ್ಮ ಕರ್ನಾಟಕದಲ್ಲಿ ಬಂದು ರಸ್ತೆ, ಟೀವಿ, ನ್ಯೂಸ್-ಪೇಪರ್, ಪಾಂಪ್ಲೆಟ್ ಎಲ್ಲಾದ್ರಲ್ಲು ಜಾಹೀರಾತುಗಳನ್ನ ಹಾಕ್ತಾರಲ್ಲ ಅವ್ರುಗಳು ಖಂಡಿತ ಅರ್ಥಾ ಮಾಡ್ಕೋ ಬೇಕು. "Glocalisation" ಇವತ್ತಿನ ವ್ಯಾಪಾರ, ಮುಕ್ತ ಮಾರುಕಟ್ಟೆಯಲ್ಲಿ ಬಹಳ ಮುಖ್ಯವಾದ ಅಂಶ. ಒಂದು ಪದಾರ್ಥ ಯಾವುದೇ ಒಂದು ಪ್ರದೇಶದಲ್ಲಿ ಎಷ್ಟರಮಟ್ಟಿಗೆ ಮಾರುಕಟ್ಟೆಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ ಅನ್ನೋದು, ಆ ಪದಾರ್ಥ ಅಲ್ಲಿನ ಜನರಿಗೆ ಎಷ್ಟು ಹತ್ರ ಆಗತ್ತೆ ಅನ್ನೋದ್ರ ಮೇಲೆ ಅವಲಂಬಿತವಾಗಿರತ್ತೆ.
Mc Donald ಇಡೀ ಜಗತ್ತಿನೆಲ್ಲೆಡೆ ಪ್ರಸಿದ್ದವಾಗಿದೆ. ಇದು ಹುಟ್ಟಿದ್ದು ಅಮೇರಿಕಾದಲ್ಲಾದ್ರೂ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಅಲ್ಲಿನ ಜನರ ಅಭಿರುಚಿಗೆ ತಕ್ಕಂತೆ ತನ್ನನ್ನು ತಾನು ಬದಲಾಯಿಸಿಕೊಂಡು ವಾಪಾರ ಮಾಡ್ತಾ ಇದೆ. ಭಾರತದಲ್ಲೂ ಇದರ ಭರಾಟೆ ಕಮ್ಮಿ ಏನಿಲ್ಲ. ಆದ್ರೆ, ಭಾರತ ಬೇರೆ ದೇಶಗಳಂತೆ ಒಂದೇ-ಒಂದು ನುಡಿಯನ್ನಾಡುವ, ಒಂದೇ-ಒಂದು ಸಂಸ್ಕ್ರುತಿಯಿರುವ ದೇಶವಲ್ಲ. ಇವರು ಇಲ್ಲಿ ಬೆಂಗಳೂರಲ್ಲಿ ಈ

ರೀತಿ ಇಂಗ್ಲೀಷ್-ನಲ್ಲಿ ಬರೆದ ಹಿಂದೀ ಜಾಹೀರಾತುಗಳನ್ನ ಹಾಕೋದ್ರಿಂದ ಇವರು ಯಾರನ್ನ ಸೆಳೀತಿದಾರೆ? ಅಷ್ಟಕ್ಕೂ ಬೆಂಗಳೂರಲ್ಲಿ ಇರೋದು ಬರೀ ಹಿಂದೀ ಮಾತಾಡೋ ಜನರಾ? ಅಥವಾ ಕನ್ನಡಿಗರಿಗೆ ಅವರ ಭಾಷೆಯಲ್ಲಿ ಯಾವುದಾದರೂ ವಿಚಾರ ತಿಳಿಸೋ ಅವಶ್ಯಕತೇನೇ ಇಲ್ಲವೋ? ಹಿಂಗ್ಲಿಷ್ ಜಾಹೀರಾತು ಯಾಕೆ?
ಮೊನ್ನೆ ಮೊನ್ನೆ ಟೀವಿಯಲ್ಲಿ ICICI prudential ಅವರ ಒಂದು ಜಾಹೀರಾತು ಬರ್ತ ಇತ್ತು. ಅಮ್ಮ ಒಬ್ಬಳು ತನ್ನ ತುಂಟ ಮಗನಿಗೆ "ಈಗ ಒಂದ್-ದಮ್ ಸುಮ್ಗಿರು" ಅಂತಾ ಅಂತಾಳೆ ಇದ್ರಲ್ಲಿ.!! ಏನಿದು "ಒಂದ್-ದಮ್"?? ಇದು ಕನ್ನಡಿಗರ್ಯಾರೂ ಬಳಸದ ಭಾಷೆ. ಯೋಚಿಸಿದ್ರೆ ಗೊತ್ತಾಗೋದು ಹಿಂದಿಯ "ಏಕ್-ದಮ್ ಚುಪ್" ಅನ್ನೋದನ್ನ ಈ ರೀತಿ ಕನ್ನಡೀಕರಿಸಿದ್ದಾರೆ.
ಇದೇ ರೀತಿ ಗೋದಿಹಿಟ್ಟು ಆಟ್ಟಾ ಆಗಿದೆ, ಬೇಳೆಗಳು ದಾಲ್ ಆಗಿವೆ, ಗೋಡಂಬಿ-ದ್ರಾಕ್ಷಿಗಳು ಕಾಜು-ಕಿಸ್ಮಿಸ್ ಆಗಿವೆ. "nimbooz" ಅವರ ಟೀ.ವಿ ಜಾಹೀರಾತಿನಲ್ಲಿ ಇರುವುದು ತಮಿಳರು, ತಮಿಳು ಅಂಗಡಿಗಳು. you see, tamil is not glocal to Karnataka. ಹಾಗೇ ಈ ಬಿಗ್-ಬಜಾರ್, ಸ್ಟಾರ್-ಬಜಾರ್ ಮುಂತಾದವರು ನ್ಯೂಸ್ ಪೇಪರ್ನಲ್ಲಿ ಹಾಕುವ ಜಾಹೀರಾತುಗಳು ದೇವರಿಗೇ ಪ್ರೀತಿ. "ಪಟ್ಟು ಪವಡೈ" ಅಂದ್ರೆ ಅದ್ ಯಾರಿಗ್ ಅರ್ಥ ಆಗತ್ತೆ? ಅಚ್ಚುಟ್ಟಾಗಿ ಕನ್ನಡದಲ್ಲಿ "ರೇಶ್ಮೆ ಲಂಗ" ಅಂತ ಬರೀಬಹುದಲ್ವೆ? ಇವರೆಲ್ಲ ಕನ್ನಡವನ್ನ ಕಡೆಗಣಿಸ್ತಿದಾರೆ ಅಂದ್ರೆ ಕನ್ನಡಿಗರನ್ನ ಕಡೆಗಣಿಸ್ತಿದಾರೆ ಅಂತಾನೆ ಅರ್ಥ. ಬೆಂಗಳೂರಿನ ಮಾಲ್-ಗಳಲ್ಲಿ ಅತೀ ಹೆಚ್ಚು ಕೊಳ್ಳುವ ಶಕ್ತಿ ಇರೋದು ಕನ್ನಡಿಗರಿಗೆ.(ಇಲ್ಲಿ ನೋಡಿ). ಹೀಗಿದ್ರೂ ಕನ್ನಡಿಗರು ತಮ್ಮ ಭಾಷೆಯಲ್ಲೆ ಎಲ್ಲಾ ಸೇವೆಗಳನ್ನ ಪಡೆಯುವುದು ಯಾಕೆ ಸಾಧ್ಯ ಆಗ್ತಾ ಇಲ್ಲ? ಪಿಜ್ಜಾ ಹಟ್ನಲ್ಲಿ, ಮಾಕ್-ಡೊನಾಲ್ಡ್ನಲ್ಲಿ ಇನ್ನೂ ಎಲ್ಲೆಲ್ಲೂ by default ಹಿಂದಿ ಹಾಡುಗಳನ್ನ ಹಾಕಿರ್ತಾರೆ. ಕನ್ನಡ ಹಾಡು ಬೇಕುಅಂತ ನಾವು ಅವರಿಗೆ Request ಮಾಡ್ಕೋಬೇಕಂತೆ. ಹೀಗೇ ಇವ್ರು ತಮಿಳ್ನಾಡ್ನಲ್ಲಿ ಹಿಂದಿ ಹಾಕಿರ್ತಾರಾ? ನಮ್ಮ ಊರಲ್ಲಿ ನಮ್ಮ ಭಾಷೆ ಹಾಡು ಕೇಳಕ್ಕೆ ನಾವೇ ಬೇಡ್ಕೋಬೇಕಾ?.
ಇವರೆಲ್ಲರನ್ನ ಸರಿದಾರಿಗೆ ತರಲು ಸಾಧ್ಯ ಇರೋದು ನಮಗೆ ಮಾತ್ರ. ಗ್ರಾಹಕರಾದ ನಮಗೆ ನಮ್ಮ ನುಡಿಯಲ್ಲೇ ಎಲ್ಲಾ ಸೇವೆಗಳನ್ನು ಪಡೆದುಕೊಳ್ಳುವ ಹಕ್ಕಿದೆ.ನಾವು ದುಡ್ಡು ಕೊಟ್ಟು ಕೊಂಡುಕೊಳ್ಳುವ ಯಾವುದೇ ಪದಾರ್ಥಗಳಿಗೆ, ಸೇವೆಗಳಿಗಾಗಿ ನಾವೇ ಬೇರೆಯಾವುದೋ ಭಾಷೆಯನ್ನ ಕಲಿಯಬೇಕಿಲ್ಲ. ಎಲ್ಲೆಲ್ಲಿ ಕನ್ನಡವನ್ನ ಕಡೆಗಣಿಸಿರ್ತಾರೋ ಅಲ್ಲಲ್ಲಿ ನಾವು ಅವರಿಗೆ ದೂರು ನೀಡಿ, ಅವರು ಕನ್ನಡವನ್ನೇ ಬಳಸುವಂತೆ ಮಾಡಬೇಕು. ಇದರಿಂದ ಅವರಿಗೇ ಲಾಭ. ಕರ್ನಾಟಕದಲ್ಲಿ ಹೆಚ್ಚು ಹೆಚ್ಚು ಜನರನ್ನು ತಲುಪಲು ಕನ್ನಡ ಬಳಸಬೇಕೇ ಹೊರತ ಇಂಗ್ಲಿಷ್ ಅಥವಾ ಹಿಂಗ್ಲಿಷ್ ಅಲ್ಲ.